ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳ ಸಂಘರ್ಷದಿಂದಾಗಿ ಭಾರತದಲ್ಲಿ ಎಲ್‌ಪಿಜಿ (ಅಡುಗೆ–ಅನಿಲ) ಮತ್ತು ಇತರ ಇಂಧನಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರ ನೇರ ಪರಿಣಾಮ ನಮ್ಮ ಬೆಂಗಳೂರಿನ ಹೋಟೆಲ್ ಉದ್ಯಮದ ಮೇಲೆ ಬಿದ್ದಿದೆ. ಸಿಲಿಂಡರ್‌ಗಳ ಕೊರತೆಯಿಂದಾಗಿ ನಗರದ ಅನೇಕ ಹೋಟೆಲ್‌ಗಳು ತಮ್ಮ ಮೆನುವಿನಿಂದ ಕೆಲವು ಖಾದ್ಯಗಳನ್ನು ಕೈಬಿಡುತ್ತಿವೆ; ಇನ್ನು ಕೆಲವು ಹೋಟೆಲ್‌ಗಳು ತಮ್ಮ ಕಾರ್ಯನಿರ್ವಹಣೆಯ ಸಮಯವನ್ನೇ ಕಡಿತಗೊಳಿಸುತ್ತಿವೆ. ಇಂತಹ ಇಂಧನ ಬಿಕ್ಕಟ್ಟಿನ ಸಮಯದಲ್ಲಿ, ಭಾರತೀಯ ವಿಜ್ಞಾನಿಗಳ ಒಂದು ಹೊಸ ಸಂಶೋಧನೆ ಭರವಸೆಯ ಕಿರಣವಾಗಿ ಮೂಡಿಬಂದಿದೆ.

ಐಐಟಿ ರೋಪರ್ ಮತ್ತು ಐಐಟಿ ಕಾನ್ಪುರದ ಇಂಜಿನಿಯರ್‌ಗಳ ತಂಡವು ದ್ರವ–ಇಂಧನಗಳಲ್ಲಿ ಅತ್ಯಂತ ಸೂಕ್ಷ್ಮವಾದ ಗಾಳಿಯ ಗುಳ್ಳೆಗಳನ್ನು ಅಥವಾ ‘ನ್ಯಾನೋಬಬಲ್‌’ಗಳನ್ನು (Nanobubbles) ಸೇರಿಸುವ ಮೂಲಕ ಅವುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಉರಿಸಬಹುದು ಎಂದು ಪತ್ತೆಹಚ್ಚಿದ್ದಾರೆ. ಈ ಪ್ರಯೋಗವೂ ನಮ್ಮ ಕಾರು-ಬೈಕು, ವಿಮಾನ ಮತ್ತು ಹೋಟೆಲ್ ಅಡುಗೆಮನೆಗಳ ಇಂಧನದ ಬಳಕೆಯನ್ನೇ ಬದಲಿಸಬಲ್ಲ ಆಶಾದಾಯಕ ಹೆಜ್ಜೆಯಾಗಿದೆ.

ಏನಿದು ನ್ಯಾನೋಬಬಲ್ ಅಥವಾ ನ್ಯಾನೋ ಬುರುಗು?
ಸಾಮಾನ್ಯವಾಗಿ ನಾವು ಸೋಡಾ ಅಥವಾ ತಂಪು ಪಾನೀಯಗಳಲ್ಲಿ ಗುಳ್ಳೆಗಳನ್ನು ನೋಡುತ್ತೇವೆ. ಈ ಗುಳ್ಳೆಗಳು ದೊಡ್ಡದಾಗಿರುತ್ತವೆ ಮತ್ತು ತಕ್ಷಣವೇ ಮೇಲೆ ಬಂದು ಒಡೆದು ಹೋಗುತ್ತವೆ. ಆದರೆ ‘ನ್ಯಾನೋಬಬಲ್‌’ಗಳು ಎನ್ನುವವು ಮರಳಿನ ಕಣಕ್ಕಿಂತ ಸಾವಿರಾರು ಪಟ್ಟು ಚಿಕ್ಕದಾದ ಗಾಳಿಯ ಚೀಲಗಳು. ಇವು ಬರಿಗಣ್ಣಿಗೆ ಕಾಣಿಸುವುದಿಲ್ಲ. ಒಂದು ಲೀಟರ್ ಪೆಟ್ರೋಲ್‌ನಲ್ಲಿ ಶತಕೋಟಿ ಇಂತಹ ಗುಳ್ಳೆಗಳಿದ್ದರೂ ಆ ಪೆಟ್ರೋಲ್ ಎಂದಿನಂತೆ ತಿಳಿಯಾಗಿಯೇ ಕಾಣಿಸುತ್ತದೆ. ಈ ಗುಳ್ಳೆಗಳು ಇಂಧನದ ಒಳಗೆ ವಾರಗಟ್ಟಲೆ ಅಥವಾ ತಿಂಗಳುಗಟ್ಟಲೆ ತೇಲುತ್ತಲೇ ಇರುತ್ತವೆ. ಇವು ಮೇಲೆ ಬಂದು ಒಡೆಯದಿರಲು ಕಾರಣ ಇವುಗಳ ಮೇಲಿರುವ ಸಣ್ಣ ಮಟ್ಟದ ನೆಗೆಟಿವ್ ಎಲೆಕ್ಟ್ರಿಕಲ್ ಚಾರ್ಜ್ ಅಥವಾ ವಿದ್ಯುತ್ ಕಾಂತೀಯ ಶಕ್ತಿ. ವಿಜ್ಞಾನದ ಭಾಷೆಯಲ್ಲಿ ಇದನ್ನು ‘ಜೀಟಾ ಪೊಟೆನ್ಷಿಯಲ್’ (Zeta Potential) ಎಂದು ಕರೆಯುತ್ತಾರೆ. ಈ ಶಕ್ತಿಯು ಗುಳ್ಳೆಗಳು ಪರಸ್ಪರ ಅಂಟಿಕೊಳ್ಳದಂತೆ ತಡೆದು ಅವು ದ್ರವದಲ್ಲಿ ಹರಡಿರುವಂತೆ ನೋಡಿಕೊಳ್ಳುತ್ತದೆ.

ಇದು ಇಂಧನವನ್ನು ಹೇಗೆ ಹೆಚ್ಚು ಶಕ್ತಿಶಾಲಿಯಾಗಿಸುತ್ತದೆ?
ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ಪೆಟ್ರೋಲ್, ಎಥೆನಾಲ್ ಮತ್ತು ಜೆಟ್ ವಿಮಾನಗಳಲ್ಲಿ ಬಳಸುವ ‘ಜೆಟ್ ಎ-1’ ಇಂಧನಗಳನ್ನು ಪರೀಕ್ಷಿಸಿದ್ದಾರೆ. ಹೈ-ಸ್ಪೀಡ್ ಕ್ಯಾಮೆರಾಗಳ ಮೂಲಕ ಗಮನಿಸಿದಾಗ, ಈ ಪುಟ್ಟ ಗುಳ್ಳೆಗಳು ಇಂಧನದ ಹನಿಯೊಳಗೆ ‘ಬೀಜಗಳಂತೆ’ ಕೆಲಸ ಮಾಡುತ್ತವೆ. ಇಂಧನ ಉರಿಯುವಾಗ ಇವುಗಳ ಒಳಗೆ ಸಣ್ಣ ಸಣ್ಣ ಸ್ಫೋಟಗಳು (Micro-explosions) ಸಂಭವಿಸುತ್ತವೆ. ಇದು ಇಂಧನವು ಗಾಳಿಯೊಂದಿಗೆ ಹೆಚ್ಚು ವೇಗವಾಗಿ ಮತ್ತು ಸಂಪೂರ್ಣವಾಗಿ ಬೆರೆಯಲು ಸಹಾಯ ಮಾಡುತ್ತದೆ. ಇದರಿಂದಾಗಿ ಇಂಧನವು ವ್ಯರ್ಥವಾಗದೆ ಪೂರ್ಣ ಪ್ರಮಾಣದಲ್ಲಿ ಉರಿಯುತ್ತದೆ, ಅಂದರೆ ಪ್ರತಿ ಹನಿ ಇಂಧನದಿಂದಲೂ ನಮಗೆ ಹೆಚ್ಚಿನ ಶಕ್ತಿ ಸಿಗುತ್ತದೆ.

ಇಂದಿನ ಪರಿಸ್ಥಿತಿಗೆ ...
ಬೆಂಗಳೂರಿನಂತಹ ನಗರಗಳಲ್ಲಿ ಹೋಟೆಲ್ ಮಾಲೀಕರು ಹಾಗು ಸಾರ್ವಜನಿಕರಿಗೆ ಎಲ್‌ಪಿಜಿ ಅಭಾವದಿಂದ ಕಂಗೆಟ್ಟಿದ್ದಾರೆ. ಮುಂದೆಯೂ ಇಂಥ ದಿನಗಳು ಇನ್ನೂ ಕಾಡಬಹುದು. ಆಗ  ಈ ನ್ಯಾನೋಬಬಲ್ ತಂತ್ರಜ್ಞಾನ ನಮ್ಮ ನೆರವಿಗೆ ಬರಬಹುದು. ಈ ತಂತ್ರಜ್ಞಾನವು ಕೇವಲ ವಾಹನಗಳಿಗೆ ಮಾತ್ರವಲ್ಲದೆ, ಅಡುಗೆ–ಅನಿಲ ಅಥವಾ ಕೈಗಾರಿಕಾ ಇಂಧನಗಳಿಗೂ ಅನ್ವಯವಾಗಬಲ್ಲದು. ಇಂಧನವು ಹೆಚ್ಚು ದಕ್ಷತೆಯಿಂದ ಉರಿಯುವುದರಿಂದ ಕಡಿಮೆ ಇಂಧನದಲ್ಲಿ ಹೆಚ್ಚು ಅಡುಗೆ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಇಂಧನದ ಮೇಲಿನ ಅವಲಂಬನೆ ಕಡಿಮೆಯಾಗುವುದಲ್ಲದೆ, ಪರಿಸರಕ್ಕೆ ಹಾನಿಕಾರಕವಾದ ಅನಿಲಗಳ ಬಿಡುಗಡೆಯೂ ಕಡಿಮೆಯಾಗುತ್ತದೆ. ವಿಶೇಷವೆಂದರೆ, ಈ ಪ್ರಕ್ರಿಯೆಗೆ ಯಾವುದೇ ದುಬಾರಿ ರಾಸಾಯನಿಕಗಳ ಅಗತ್ಯವಿಲ್ಲ.

ಪ್ರಸ್ತುತ ಈ ಸಂಶೋಧನೆಯು ಪ್ರಯೋಗಾಲಯದ ಹಂತದಲ್ಲಿದ್ದು, ದೊಡ್ಡ ಮಟ್ಟದ ಇಂಜಿನ್‌ಗಳಲ್ಲಿ ಇದನ್ನು ಅಳವಡಿಸಲು ಇನ್ನು ಕೆಲವು ಅಧ್ಯಯನಗಳ ಅಗತ್ಯವಿದೆ. ಆದರೂ, ಭಾರತೀಯ ವಿಜ್ಞಾನಿಗಳ ಈ ಸಾಧನೆಯು ಇಂಧನ ಕೊರತೆಯ ಸಮಸ್ಯೆಗೆ ಒಂದು ಸುಸ್ಥಿರ ಮತ್ತು ಸ್ವದೇಶಿ ಪರಿಹಾರವನ್ನು ಒದಗಿಸುವ ಭರವಸೆ ನೀಡಿದೆ. ಭವಿಷ್ಯದಲ್ಲಿ ನಮ್ಮ  ಹೋಟೆಲ್‌ಗಳು, ವಾಹನಗಳು ಈ ‘ನ್ಯಾನೋ ನ್ಯಾನೋಬಬಲ್’ ಇಂಧನದಿಂದ ಚಲಿಸಿದರೆ ಆಶ್ಚರ್ಯ ಪಡಬೇಕಿಲ್ಲ.


ಸೂಚನೆ: ಈ ಲೇಖನದ ಮೊದಲ ಆವೃತ್ತಿ ಪ್ರಜಾವಾಣಿಯಲ್ಲಿ ಪ್ರಕಟಣೆ ಆಗಿದೆ.