ಹಲವು ಔಷಧಗಳಿಗೆ ರೋಧವನ್ನು ತೋರುವಂತಹ, ಕ್ಷಯದ ರೋಗಾಣುಗಳನ್ನು ಕ್ಷಿಪ್ರವಾಗಿ ಪತ್ತೆ ಮಾಡಬಲ್ಲ ವಿಧಾನವೊಂದನ್ನು, ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಹಾಗೂ ನವದೆಹಲಿಯ ರಾಷ್ಟ್ರೀಯ ಕ್ಷಯ ಹಾಗೂ ಶ್ವಾಸರೋಗಗಳ ಸಂಶೋಧನಾಲಯದ ವಿಜ್ಞಾನಿಗಳು ರೂಪಿಸಿದ್ದಾರೆ. ಕ್ವಿಕ್‌ ಡಿಎನ್‌ಎ ಕಿಟ್‌ ಎನ್ನುವ ಈ ಕಿಟ್‌ ಇದೀಗ ಬಳಕೆಯಲ್ಲಿರುವ ರೋಗಾಣು ಪತ್ತೆ ವಿಧಾನಗಳಷ್ಟೇ ನಿಖರವಾಗಿ, ಆದರೆ ಕಡಿಮೆ ಸಮಯದಲ್ಲಿ ಹಲವು ಔಷಧಗಳಿಗೆ ನಿರೋಧ ತೋರುವ ಕ್ಷಯದ ರೋಗಾಣುಗಳನ್ನು ಪತ್ತೆ ಮಾಡುತ್ತದಷ್ಟೆ ಅಲ್ಲದೇ, ಅನುಕೂಲವೂ ಹೆಚ್ಚು. ಏಕೆಂದರೆ ಇದರಲ್ಲಿ ಬಳಸುವ ವಿಶೇಷ ಫಿಲ್ಟರ್‌ ಕಾಗದದಿಂದಾಗಿ ರೋಗಿಯ ಉಗುಳಿನ ಮಾದರಿಗಳನ್ನು, ಯಾವುದೇ ಶೀತಲೀಕರಣದ ಅಗತ್ಯವೂ ಇಲ್ಲದಂತೆ, ಭಾರತದ ಬಿರುಬೇಸಗೆಯ ಉಷ್ಣತೆಯಲ್ಲಿಯೂ ಸಾಗಿಸಬಹುದಾಗಿದೆ. ಹೀಗಾಗಿ ದೂರದೂರದ ಗ್ರಾಮಗಳಲ್ಲಿನ ಜೀವಗಳ ರಕ್ಷಣೆಗೆ ಹೆಚ್ಚು ನೆರವಾಗಲಿದೆ. 

ಕ್ಷಯ ರೋಗದ ಬ್ಯಾಕ್ಟೀರಿಯಾಗಳನ್ನು ಸೋಸಿ ಹಿಡಿದಿಟ್ಟುಕೊಳ್ಳಬಲ್ಲ ಟ್ರಾನ್ಸ್‌ ಫಿಲ್ಟರ್‌ ಎನ್ನುವ ಸೋಸು ಪೊರೆ ಈ ಕಿಟ್‌ನ ಪ್ರಧಾನ ಅಂಶವಾಗಿದ್ದು, ಸಾಗಾಟದ ವೇಳೆ ಉಗುಳಿನ ಮಾದರಿಯಿಂದ ಅಪಾಯವಾಗದಂತೆ ತಡೆಯುತ್ತದೆ. ರಕ್ತದ ಮಾದರಿಯನ್ನು ಯಾವ ಅಪಾಯವೂ ಇಲ್ಲದೆ ಸುರಕ್ಷಿತವಾಗಿ ದೂರದೂರಕ್ಕೆ ಸಾಗಿಸಬಹುದು. ಸಾಧಾರಣವಾಗಿ ಕ್ಷಯ ರೋಗ ಪತ್ತೆಗೆ ರೋಗಿಗಳಿಂದ ಉಗುಳನ್ನು ಸಂಗ್ರಹಿಸಿ, ಗಾಜಿನ ಪುಟ್ಟ ಕೊಳವೆಗಳಲ್ಲಿ ತುಂಬಿ, ತಣಿಸಿದ ವಾತಾವರಣದಲ್ಲಿ ಅಥವಾ ರೆಫ್ರಿಜರೇಟರುಗಳಲ್ಲಿ ದೂರದ ಪ್ರಯೋಗಾಲಯಕ್ಕೆ ಸಾಗಿಸಲಾಗುತ್ತದೆ. ಈ ಟ್ರಾನ್ಸ್‌ ಫಿಲ್ಟರ್ ಉಗುಳನ್ನು ಒಣಗಿಸಿ, ಬ್ಯಾಕ್ಟೀರಿಯಾಗಳನ್ನು ಕಾಗದದಂತಹ ಫಿಲ್ಟರಿನಲ್ಲಿ ಬಂಧಿಸಿಡಲು ನೆರವಾಗುತ್ತದೆ. 

ಈ ಹೊಸ ವಿಧಾನವನ್ನು ಪರೀಕ್ಷಿಸಲು ಸಂಶೋಧಕರು ಸಾವಿರದ ಎಂಟನೂರಕ್ಕೂ ಹೆಚ್ಚು ಜನರ ಉಗುಳಿನ ದ್ರವವನ್ನು ಬಳಸಿದರು. ರೋಗಿಯ ಉಗುಳಿನ ಮಾದರಿಯನ್ನು ಸಂಗ್ರಹಿಸಿ, ಅದನ್ನು ನೀರಾಗಿಸಲಾಯಿತು. ಈ ನೀರಿನಂತಹ ದ್ರವವನ್ನು ಟ್ರಾನ್ಸ್‌ ಫಿಲ್ಟರ್ ಇರುವ ಸಾಧನದ ಮೂಲಕ ಸೋಸಲಾಯಿತು. ದ್ರವವು ಸಾಧನದ ಮೂಲಕ ಸಾಗುವಾಗ, ಸೂಕ್ಷ್ಮ ರಂಧ್ರಗಳಿರುವ ಬಲೆಯಂತಹ ಪೊರೆಯು, ಕ್ಷಯ ರೋಗದ ಬ್ಯಾಕ್ಟೀರಿಯಾಗಳನ್ನು ಸೆರೆ ಹಿಡಿದು, ದ್ರವವನ್ನಷ್ಟೇ ಹೊರ ಹೋಗುವಂತೆ ಮಾಡುತ್ತದೆ. ಅನಂತರ ಈ ಪೊರೆಗಳನ್ನು ಒಣಗಿಸಿ, ಶುಚಿಗೊಳಿಸಲಾಗುತ್ತದೆ. ಇದು ಬ್ಯಾಕ್ಟೀರಿಯಾದ ಡಿಎನ್‌ಎಯನ್ನು ಪೊರೆಯಲ್ಲಿ ಬಂಧಿಸಿಡುತ್ತದೆ. ಅನಂತರ ಈ ಫಿಲ್ಟರುಗಳನ್ನು ಪುಟ್ಟ ಜಿಪ್‌ ಲಾಕ್‌ ಚೀಲಗಳಲ್ಲಿ ಹಾಕಿ ಸಾಗಿಸಬಹುದು. ಈ ಟ್ರಾನ್ಸ್‌ ಫಿಲ್ಟರುಗಳು ಬಾಳಿಕೆಯುಳ್ಳವು ಎಂದು ಸಂಶೋಧಕರು ಗುರುತಿಸಿದ್ದಾರೆ. ಪರೀಕ್ಷೆಯ ಸಮಯದಲ್ಲಿ ಈ ಪೊರೆಗಳನ್ನು ೫೦ ಸಿ ಯಷ್ಟು  ಹೆಚ್ಚಾದ ತಾಪಮಾನದಲ್ಲಿ, ಮೂರ್ನಾಲ್ಕು ವಾರಗಳವರೆಗೆ ಸಂಗ್ರಹಿಸಿ ಇಡಲಾಗಿತ್ತು. ಭಾರತದಲ್ಲಿ ಕಡು ಬೇಸಗೆಯ ಸ್ಥಿತಿಯಂತಹ ಈ ಪರಿಸರವನ್ನೂ ತಡೆದುಕೊಂಡ ಮಾದರಿಯಲ್ಲಿನ ಬ್ಯಾಕ್ಟೀರಿಯಾ ಡಿಎನ್‌ಎ ಸಂಪೂರ್ಣವಾಗಿ ಸುರಕ್ಷಿತವಾಗಿತ್ತು. 

ಪೊರೆಯು ಬಂದು ತಲುಪಿದ ಕೂಡಲೇ ಪ್ರಯೋಗಾಲಯದಲ್ಲಿ ಅದನ್ನು ಸ್ಥಿರವಾದ ಆಮ್ಲೀಯತೆ ಇರುವ ಬಫರ್‌ ದ್ರಾವಣದಲ್ಲಿಟ್ಟು ಐದು ನಿಮಿಷಗಳವರೆಗೆ ಎಂಭತ್ತು ಡಿಗ್ರಿ ಸೆಂಟಿಗ್ರೇಡಿಗೆ ಕಾಯಿಸಲಾಗುವುದು. ಇದರಿಂದ ಕ್ಷಯದ ಬ್ಯಾಕ್ಟೀರಿಯಾಗಳ ಕಠಿಣವಾದ ಹೊರ ಹೊದಿಕೆ ಹರಿದು, ಡಿಎನ್‌ಎ ಹೊರಬರುತ್ತದೆ. ಇದನ್ನು ಲೈನ್‌ ಪ್ರೋಬ್‌ ಅಸ್ಸೇ ಎನ್ನುವ ವಿಧಾನದಿಂದ ಅನಂತರ ವಿಶ್ಲೇಷಿಸಲಾಗುತ್ತದೆ. ಈ ವಿಧಾನವು ಬ್ಯಾಕ್ಟೀರಿಯಾದ ಡಿಎನ್‌ಎಯಲ್ಲಿ ಇರಬಹುದಾದ ವಿಶಿಷ್ಟ ವಿಕೃತಿಗಳನ್ನು ಗುರುತಿಸಬಲ್ಲುದು. ಈ ವಿಕೃತಿಗಳು ಆ ನಿರ್ದಿಷ್ಟ ಬ್ಯಾಕ್ಟೀರಿಯಾ ತಳಿ ರಿಫಾಂಪಿಸಿನ್‌ ಅಥವಾ ಐಸೊನಿಯಾಜಿಡ್‌ನಂತಹ ಆಂಟಿಬಯಾಟಿಕ್ ಗಳಿಗೆ ರೋಧವನ್ನು ಬೆಳೆಸಿಕೊಂಡಿವೆ ಎನ್ನುವುದರ ಕುರುಹುಗಳು.  

ಸಾಮಾನ್ಯವಾಗಿ, ಕ್ಷಯ ರೋಗದ ಮಾದರಿಯಿಂದ ಡಿಎನ್‌ಎಯನ್ನು ಹೊರತೆಗೆಯುವುದಕ್ಕೆ  ಏಳು ಹಂತಗಳಿರುವ ಒಂದು ಗಂಟೆಯ ಶ್ರಮ ಅಗತ್ಯ. ಅಲ್ಲದೆ ಇದಕ್ಕಾಗಿ ಉಗುಳಿನ ಮಾದರಿಗಳನ್ನು ಮಂಜುಗಡ್ಡೆಯ ಮೇಲಿಟ್ಟು, ನಲವತ್ತೆಂಟು ಗಂಟೆಗಳ ಒಳಗೆ ಪ್ರಯೋಗಾಲಯಕ್ಕೆ ಸಾಗಿಸಬೇಕು. ಡಿಎನ್‌ಎ ಹಾಳಾಗದಂತೆ ತಡೆಯಲು ಇದು ಅಗತ್ಯ. ಅದರೆ ಇದೀಗ ಕ್ವಿಕ್‌ ಡಿಎನ್‌ಎ ಕಿಟ್‌ ಇದನ್ನೆಲ್ಲ ಐದೇ ನಿಮಿಷದಲ್ಲಿ ಮಾಡಬಹುದಾದ ಒಂದು ಹಂತದ ಕ್ರಿಯೆಯನ್ನಾಗಿಸಿದೆ. ಟ್ರಾನ್ಸ್‌ ಫಿಲ್ಟರಿನ ಬಳಕೆಯಿಂದ ಕೋಣೆಯ ವಾತಾವರಣದಲ್ಲಿಯೂ ಮಾದರಿಗಳು ಹಲವು ವಾರಗಳ ಕಾಲ ಸ್ಥಿರವಾಗಿರಬಲ್ಲವು. ಇದು ವಿದ್ಯುಚ್ಛಕ್ತಿ ಸರಬರಾಜು ಇಲ್ಲದ ಅಥವಾ ಬಲು ದೂರದ ಪ್ರದೇಶಗಳಿಗೆ ಸಾಗಿಸುವಾಗ ಉಂಟಾಗುವ ಸವಾಲುಗಳನ್ನು ನಿವಾರಿಸುತ್ತದೆ. ಈ ಸುಧಾರಿತ ಪರೀಕ್ಷೆಗಳು ಸಾಮಾನ್ಯವಾಗಿ ದುರ್ಲಭವಾದವರಿಗೂ ದೊರಕುವಂತೆ ಮಾಡುತ್ತದೆ. 

ಸಂಶೋಧಕರ ಪ್ರಕಾರ, ಈ ಅಧ್ಯಯನವು ಸೋಂಕು ಖಚಿತವಾದ, ಬ್ಯಾಕ್ಟೀರಿಯಾಗಳ ಸಂಖ್ಯೆ ಹಚ್ಚಿರುವ ಮಾದರಿಗಳನ್ನು ಬಳಸಿದ್ದವು. ಆದರೆ ಸೋಂಕು ಇನ್ನೂ ಖಚಿತವಾಗಿಲ್ಲದ ಹಾಗೂ ಬ್ಯಾಕ್ಟೀರಿಯಾಗಳ ಸಂಖ್ಯೆ ವಿರಳವಾಗಿರುವ ಮಾದರಿಗಳಲ್ಲಿಯೂ ಈ ಪರೀಕ್ಷೆ ಫಲ ನೀಡುವುದೇ ಎನ್ನುವುದನ್ನು ಇನ್ನು ಮುಂದಷ್ಟೇ ಪರೀಕ್ಷಿಸಬೇಕಿದೆ. ಜೊತೆಗೆ ಈ ಪರೀಕ್ಷೆ ಬಹಳಷ್ಟು ಔಷಧ ರೋಧಕ ತಳಿಗಳಿಗೆ ನಿಖರವಾಗಿದ್ದರೂ, ಐಎನ್‌ಎಚ್‌ಎ ಎನ್ನುವ ಒಂದು ಜೀನ್‌ ಇರವವುಗಳನ್ನು ಪತ್ತೆ ಮಾಡುವಷ್ಟು ಸೂಕ್ಷ್ಮವಾಗಿರಲಿಲ್ಲ. ಬಹುಶಃ ಅದಕ್ಕೆ ಬೇಕಾದ ಪರಿಸ್ಥಿತಿಗಳು ವಿಶಿಷ್ಟವಾಗಿದ್ದರಿಂದಲೋ, ಅಥವಾ ಈ ವಿಕೃತಿಗಳೇ ಅಪರೂಪವಾಗಿದ್ದರಿಂದಲೋ ಹೀಗಾಗಿರಬಹುದು ಎನ್ನುವುದು ಸಂಶೋಧಕರ ಅನಿಸಿಕೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸುವ ತಾಂತ್ರಿಕರಿಗೆ ಫಲವೇನೆಂದು ಖಚಿತವಾಗಿ ಹೇಳುವುದು ಕಷ್ಟವಾಗುತ್ತದೆ. 

ಅದೇನೇ ಇರಲಿ. ಕಠಿಣ ಸವಾಲೊಡ್ಡುವ ಪರಿಸ್ಥಿತಿಗಳಲ್ಲಿಯೂ ಸರಳವಾಗಿ ಪರೀಕ್ಷೆ ನಡೆಸಲು ಈ ತಂತ್ರ ನೆರವಾಗಿದೆ. ಪ್ರಪಂಚದಲ್ಲಿರುವ ಮಾರಕ ಸೋಂಕು ರೋಗಗಳಲ್ಲಿ ಕ್ಷಯವೂ ಪ್ರಧಾನವಾಗಿರುವುದೂ, ಇದರ ರೋಗಾಣುಗಳಲ್ಲಿ ಔಷಧ ರೋಧ ಹೆಚ್ಚಾಗುತ್ತಿರುವುದೂ ಜಾಗತಿಕವಾಗಿ ತುರ್ತು ಪರಿಸ್ಥಿತಿಯಂತಹ ಸ್ಥಿತಿಯನ್ನು ತಂದಿದೆ. ಭಾರತದಂತಹ ದೇಶಗಳಲ್ಲಿ, ರೋಗದ ಮೊದಲ ಲಕ್ಷಣಗಳು ಕಂಡಾಗನಿಂದ, ರೋಗವನ್ನು ಖಚಿತಪಡಿಸಿಕೊಂಡು ನಿರ್ದಿಷ್ಟ ಚಿಕಿತ್ಸೆಯನ್ನು ಆರಂಭಿಸುವುದರ ನಡುವಣ ಇರುವ ಅವಧಿ ಬಲು ದೀರ್ಘ. ಮಾದರಿಗಳ ಸಾಗಾಟವನ್ನು ಸರಳಗೊಳಿಸುವ ಮೂಲಕ, ಪ್ರಯೋಗಾಲಯದ ಪರೀಕ್ಷೆಗಳನ್ನು ಸರಾಗಗೊಳಿಸುವ ಮೂಲಕ, ಈ ಹೊಸ ಕಿಟ್ಟು ಆ ಕೊರತೆಯನ್ನು ತುಂಬಲಿದೆ.