ನಮ್ಮ ಕಣ್ಣಿಗೆ ಕಾಣುವ ಸಮುದ್ರದ ಅಲೆಗಳ ಅಡಿಯಲ್ಲಿ, ಅಂದರೆ ಸುಮಾರು ಒಂಬತ್ತು ಕೋಟಿ ಇಪ್ಪತ್ತು ಲಕ್ಷ ವರ್ಷಗಳಷ್ಟು ಹಳೆಯದಾದ ಭೂಮಿಯ ಪದರವೊಂದು ಪತ್ತೆಯಾಗಿದೆ. ಈ ಮಹತ್ವದ ಸಂಶೋಧನೆಯು ಭಾರತದ ಉಪಖಂಡವು ಆಫ್ರಿಕಾದಿಂದ ಹೇಗೆ ಬೇರ್ಪಟ್ಟು ನೈಋತ್ಯಕ್ಕೆ ಚಲಿಸಿತು ಎಂಬ ದಶಕಗಳ ಕಾಲದ ಭೌಗೋಳಿಕ ಗೊಂದಲಕ್ಕೆ ಉತ್ತರ ನೀಡಿದೆ.

ಸಾಮಾನ್ಯವಾಗಿ ವಿಜ್ಞಾನಿಗಳು ಸಮುದ್ರದ ಆಳದಲ್ಲಿರುವ ಭೂಮಿಯ ವಯಸ್ಸನ್ನು ಅಲ್ಲಿನ ಶಿಲೆಗಳಲ್ಲಿ ಅಡಗಿರುವ ಕಾಂತೀಯ ಪಟ್ಟಿಗಳ (Magnetic Stripes) ಮೂಲಕ ಅಳೆಯುತ್ತಾರೆ. ಭೂಮಿಯ ಒಳಗಿನಿಂದ ಲಾವಾರಸವು ಮೇಲೆ ಬಂದು ತಣ್ಣಗಾದಾಗ, ಅದರಲ್ಲಿರುವ ಖನಿಜಗಳು ಆ ಸಮಯದಲ್ಲಿ ಭೂಮಿಯ ಕಾಂತೀಯ ದಿಕ್ಕಿಗೆ ತಕ್ಕಂತೆ ಜೋಡಣೆಯಾಗುತ್ತವೆ. ಭೂಮಿಯ ಕಾಂತೀಯ ಉತ್ತರ ಮತ್ತು ದಕ್ಷಿಣ ಧ್ರುವಗಳು ಕಾಲಕಾಲಕ್ಕೆ ಅದಲುಬದಲಾಗುತ್ತಿರುತ್ತವೆ. ಹೀಗಾಗಿ ಸಮುದ್ರದ ತಳವು ಒಂದು ದೊಡ್ಡ ಟೇಪ್ ರೆಕಾರ್ಡರ್ ನಂತೆ ಕೆಲಸ ಮಾಡುತ್ತದೆ ಮತ್ತು ಅಲ್ಲಿನ ಕಾಂತೀಯ ಬದಲಾವಣೆಗಳನ್ನು ನೋಡಿ ಆ ಪದರ ಎಷ್ಟು ಹಳೆಯದು ಎಂದು ಹೇಳಬಹುದು.

ಆದರೆ ಬಂಗಾಳಕೊಲ್ಲಿಯ ವಿಷಯದಲ್ಲಿ ಇದು ಅಷ್ಟು ಸುಲಭವಾಗಿರಲಿಲ್ಲ. ಇಲ್ಲಿನ ಭೂಮಿಯ ಪದರವು ‘ಕ್ರಿಟೇಶಿಯಸ್ ನಾರ್ಮಲ್ ಸೂಪರ್‌ಕ್ರಾನ್’ ಎಂಬ ಕಾಲಘಟ್ಟದಲ್ಲಿ ನಿರ್ಮಾಣವಾಗಿತ್ತು. ಸುಮಾರು 12 ಕೋಟಿಯಿಂದ 8 ಕೋಟಿ 30 ಲಕ್ಷ ವರ್ಷಗಳ ಹಿಂದಿನ ಈ ಅವಧಿಯಲ್ಲಿ ಈ ಭಾಗದಲ್ಲಿ ಭೂಮಿಯ ಕಾಂತೀಯ ಧ್ರುವಗಳು ಯಾವುದೇ ಬದಲಾವಣೆ ಕಾಣದೆ ಸ್ಥಿರವಾಗಿದ್ದವು. ಇದರಿಂದಾಗಿ ವಿಜ್ಞಾನಿಗಳಿಗೆ ಯಾವುದೇ ‘ಬಾರ್‌ಕೋಡ್’ ಅಥವಾ ಕಾಂತೀಯ ಪಟ್ಟಿಗಳು ಸಿಗದೆ ಗೊಂದಲ ಉಂಟಾಗಿತ್ತು. ಇದರ ಜೊತೆಗೆ ಹಿಮಾಲಯದಿಂದ ಹರಿದು ಬಂದ ಬೃಹತ್ ಪ್ರಮಾಣದ ಹೂಳು (ಸೆಡಿಮೆಂಟ್) ಮತ್ತು ಜ್ವಾಲಾಮುಖಿಯ ಚಟುವಟಿಕೆಗಳು ಈ ಹಳೆಯ ಪದರವನ್ನು ಸುಮಾರು 18 ಕಿಲೋಮೀಟರ್ ದಪ್ಪದ ಮಣ್ಣಿನ ಅಡಿಯಲ್ಲಿ ಹೂತುಹಾಕಿದ್ದವು.

ಈ ಸವಾಲನ್ನು ಎದುರಿಸಲು ಐಐಎಸ್ಇಆರ್ ಪುಣೆಯ ಸಂಶೋಧಕರಾದ ಮೊಹಮ್ಮದ್ ಇಸ್ಮಾಯಿಲ್ ಮತ್ತು ಕೊಳ್ಳೂರು ಶ್ರೀಕೃಷ್ಣ ಅವರು ಹೊಸ ಹಾದಿ ಹಿಡಿದರು. ಅವರು ಕಾಂತೀಯ ದಿಕ್ಕಿನ ಬದಲಾವಣೆಗಾಗಿ ಹುಡುಕುವ ಬದಲು, ಕಾಂತೀಯ ಕ್ಷೇತ್ರದ ತೀವ್ರತೆಯಲ್ಲಿ ಉಂಟಾಗುವ ಅತ್ಯಂತ ಸಣ್ಣ ಏರಿಳಿತವೊಂದನ್ನು ಗಮನಿಸಿದರು. ಇದನ್ನು ವಿಜ್ಞಾನದ ಭಾಷೆಯಲ್ಲಿ ‘Q1’ ಎಂದು ಕರೆಯಲಾಗುತ್ತದೆ. ಇದು ಧ್ರುವಗಳ ಬದಲಾವಣೆಯಲ್ಲ ಬದಲಾಗಿ ಕಾಂತೀಯ ಶಕ್ತಿಯಲ್ಲಿ ಉಂಟಾಗುವ ಒಂದು ಕ್ಷಣಿಕ ಸ್ಪಂದನ ಅಥವಾ ಮಿಡಿತ ಎನ್ನಬಹುದು.

ಸಂಶೋಧಕರು ಸಂಶೋಧನಾ ಹಡಗುಗಳ ಮೂಲಕ ಕಾಂತೀಯ ಸಂವೇದಕಗಳನ್ನು ಬಳಸಿ ದತ್ತಾಂಶವನ್ನು ಸಂಗ್ರಹಿಸಿದರು. ನಂತರ ಇದನ್ನು ಸ್ಯಾಟಲೈಟ್ ಮಾಡೆಲ್‌ಗಳು ಮತ್ತು ಭೂಮಿಯ ಒಳಗಿನ ಚಿತ್ರಣ ನೀಡುವ ‘ಸೀಸ್ಮಿಕ್ ರಿಫ್ಲೆಕ್ಷನ್ ಇಮೇಜಿಂಗ್’ ತಂತ್ರಜ್ಞಾನದೊಂದಿಗೆ ಹೋಲಿಸಿ ನೋಡಿದರು. ಈ ಸಂಶೋಧನೆಯ ಫಲವಾಗಿ ಬಂಗಾಳಕೊಲ್ಲಿಯ ಮಧ್ಯಭಾಗದಲ್ಲಿ, ಅಂದರೆ ಸುಮಾರು 12 ಡಿಗ್ರಿ ಉತ್ತರ ಅಕ್ಷಾಂಶದಲ್ಲಿ, ಎರಡು ಬೃಹತ್ ಜಲಂತರ ಪರ್ವತ ಶ್ರೇಣಿಗಳ ನಡುವೆ ಈ ‘Q1’ ಸಂಕೇತವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಇದು ಈ ಭಾಗದ ಭೂಮಿಯ ಪದರವು ಸರಿಯಾಗಿ 9 ಕೋಟಿ 20 ಲಕ್ಷ ವರ್ಷಗಳಷ್ಟು ಹಳೆಯದು ಎಂಬುದನ್ನು ಸಾಬೀತುಪಡಿಸಿದೆ.

ಈ ಸಂಶೋಧನೆಯು ಕೇವಲ ಒಂದು ಸಂಖ್ಯೆಯಲ್ಲ, ಇದು ಭೂಮಿಯ ಇತಿಹಾಸದ ಬಗ್ಗೆ ತಿಳಿಸಿಕೊಡುವ ಒಂದು ಪ್ರಮುಖ ಅಂಶ. ಕೋಟ್ಯಂತರ ವರ್ಷಗಳ ಹಿಂದೆ ಭೂಮಿಯ ಮೇಲಿನ ಎಲ್ಲ ಖಂಡಗಳೂ ‘ಗೊಂಡ್ವಾನ’ ಎಂಬ ಒಂದೇ ಬೃಹತ್ ಖಂಡದ ಭಾಗವಾಗಿದ್ದವು. ಕಾಲಕ್ರಮೇಣ ಇವು ಬೇರ್ಪಡಲು ಆರಂಭಿಸಿದವು. ಈಗಿನ ಕರ್ನಾಟಕವನ್ನೊಳಗೊಂಡ ಭಾರತದ ಭಾಗವು ಆಫ್ರಿಕಾದಿಂದ ಬೇರ್ಪಟ್ಟು ನೈಋತ್ಯ ದಿಕ್ಕಿನಲ್ಲಿ ಚಲಿಸಿ ಏಷ್ಯಾದೊಂದಿಗೆ ವಿಲೀನವಾಯಿತು. ಈ ಚಲನೆ ಮತ್ತು ಪಲ್ಲಟಗಳು ಯಾವಾಗ ನಡೆದವು ಎಂಬ ನಿಖರವಾದ ಕಾಲಸೂಚಿಯನ್ನು ಈ ಒಂಬತ್ತು ಕೋಟಿ ಇಪ್ಪತ್ತು ಲಕ್ಷ ವರ್ಷಗಳ ಹಳೆಯ ಭೂಮಿಯ ಪದರವು ಒದಗಿಸಿದೆ. ಭಾರತದ ಭಾಗವು ಏಷ್ಯಾಖಂಡದ ಜೊತೆ ವಿಲೀನವಾದಾಗಲೇ ಹಿಮಾಲಯ ಪರ್ವತಶ್ರೇಣಿಗಳು ಮೂಡಿದವು.

ನಮ್ಮ ಕರ್ನಾಟಕದ ಪಶ್ಚಿಮ ಕರಾವಳಿ ಮತ್ತು ದಖನ್ ಪ್ರಸ್ಥಭೂಮಿಯ ರಚನೆಯ ಹಿಂದೆಯೂ ಇಂತಹದ್ದೇ ಜ್ವಾಲಾಮುಖಿ ಮತ್ತು ಪ್ಲೇಟ್ ಟೆಕ್ಟೋನಿಕ್ಸ್ ಎಂಬ ಭೂಪದರಗಳ ಚಲನೆಯ ಇತಿಹಾಸವಿದೆ. ಹಾಗೆಯೇ ನಮ್ಮ ಪಶ್ಚಿಮಘಟ್ಟ ಹಾಗು ಅಲ್ಲಿನ ನದಿಗಳಾದ ಕಾವೇರಿ, ತುಂಗೆ, ಭದ್ರ ಎಲ್ಲವೂ ಹಿಮಾಲಯಕ್ಕಿಂತ ಪ್ರಾಚೀನವಾದದ್ದು. ಬಂಗಾಳಕೊಲ್ಲಿಯಲ್ಲಿ ದೊರೆತಿರುವ ಈ ಪುರಾವೆಯು ಒಟ್ಟಾರೆ ಭಾರತೀಯ ಭೂಭಾಗದ ವಿಕಾಸವನ್ನು ಅರ್ಥಮಾಡಿಕೊಳ್ಳಲು ದಾರಿದೀಪವಾಗಿದೆ. ಸಂಶೋಧಕರು ಇನ್ನೂ ಹಳೆಯದಾದ ಅಂದರೆ 10 ಕೋಟಿ 80 ಲಕ್ಷ ವರ್ಷಗಳಷ್ಟು ಹಳೆಯ ‘Q2’ ಎಂಬ ಸಂಕೇತಕ್ಕಾಗಿ ಹುಡುಕಾಟ ನಡೆಸಿದ್ದರು. ಆದರೆ ಜ್ವಾಲಾಮುಖಿಯ ಪ್ರಭಾವದಿಂದ ಅದು ಅಸ್ಪಷ್ಟವಾಗಿ ಉಳಿದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ತಂತ್ರಜ್ಞಾನ ಬಳಸಿ ಈ ರಹಸ್ಯವನ್ನೂ ಭೇದಿಸಬಹುದು ಎಂಬ ಭರವಸೆ ವಿಜ್ಞಾನಿಗಳದ್ದಾಗಿದೆ.

ಒಟ್ಟಿನಲ್ಲಿ ಸಮುದ್ರದ ತಳದಲ್ಲಿನ ಈ ಸಂಶೋಧನೆಯು ನಮ್ಮ ಭೂಮಿಯ ರಚನೆಯ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದೆ. ವಿಜ್ಞಾನಿಗಳ ಈ ಸಾಧನೆಯು ಭೂಗರ್ಭ ಶಾಸ್ತ್ರದ ನಕ್ಷೆಯಲ್ಲಿ ಭಾರತಕ್ಕೆ ಒಂದು ಮಹತ್ವದ ಸ್ಥಾನ ತಂದುಕೊಟ್ಟಿದೆ. ನಮ್ಮ ಕಾಲು ಕೆಳಗಿರುವ ಮಣ್ಣು ಮತ್ತು ನಾವು ವಾಸಿಸುವ ಭೂಮಿ ಹೇಗೆ ರೂಪುಗೊಂಡಿತು ಎಂಬ ಕುತೂಹಲಕ್ಕೆ ಈ ಸಂಶೋಧನೆ ಒಂದು ಸ್ಪಷ್ಟ ಉತ್ತರ ನೀಡಿದೆ.


ಸೂಚನೆ: ಈ ಲೇಖನ ಮೊದಲು ಪ್ರಜಾವಾಣಿಯಲ್ಲಿ ಪ್ರಕಟಣೆ ಆಗಿದೆ.